ಕೃಷúರಾಯರು, ಯು ಎಸ್ (ಮಂಗಳೂರು)
(1914-) ಕರಾವಳಿಯ ತೀರದ ಮಂಗಳೂರಿಗೆ ನೃತ್ಯ ಕಲಾಸಂಪತ್ತನ್ನು ಪರಿಚಯಿಸಿದ ವ್ಯಕ್ತಿ ನಾಟ್ಯಾಚಾರ್ಯ ಯು.ಎಸ್.ಕೃಷ್ಣರಾಯರು. ಹುಟ್ಟಿದ್ದು 1914ರ ನವೆಂಬರ್ 14ರಲ್ಲಿ ಉಡುಪಿಯ ಸಮೀಪದ ಉಚ್ಚಿಲದಲ್ಲಿ. ತಂದೆ ಸುಬ್ಬರಾಯರು, ಸಂಪ್ರದಾಯಸ್ಥ ಹಾಗೂ ಶಿಸ್ತಿಗೆ ಹೆಸರಾದ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ವಿದ್ಯಾಭ್ಯಾಸ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ. ಕೃಷ್ಣರಾಯರಿಗೆ ಹಾಡು, ಅಭಿನಯದಲ್ಲಿ ಆಸಕ್ತಿ, ಹುಟ್ಟಿನಿಂದಲೇ ಬೆಳೆದು ಬಂದದ್ದು. ಕನ್ನಡ ಪಂಡಿತ, ಕವಿ ಎಂ.ಎನ್ ಕಾಮತರ ಮಾರ್ಗದರ್ಶನದಲ್ಲಿ ಆ ಅಭಿರುಚಿಯ ವಿಕಾಸ. ಶಾಲೆಯ ನಾಟಕಗಳಲ್ಲಿ ಪ್ರಧಾನ ಪಾತ್ರಗಳೆಲ್ಲಾ ಇವರ ಪಾಲು. ಗಾಯನದಲ್ಲಿ ಅಭಿನಯದಲ್ಲಿ ಅವರಿಗೆ ಸರಿಗಟ್ಟುವವರೇ ಇರಲಿಲ್ಲ.

	ಅಂತರರಾಷ್ಟ್ರೀಯ ನೃತ್ಯ ಕಲಾವಿದ ಉದಯಶಂಕರರ ತಂಡದಲ್ಲಿದ್ದ ನೃತ್ಯಕಲಾವಿದ ಕೆ.ಕೆ.ಶೆಟ್ಟಿ ಮಂಗಳೂರಿಗೆ ಹಿಂತಿರುಗಿ ಬಂದರು. ಕೃಷ್ಣರಾಯರು, ಅವರ ಶಿಷ್ಯರಾದರು. 1934ರಲ್ಲಿ ಕದ್ರಿಯ ವಿದ್ಯಾ ಬೋಧಿನಿ ಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿರಂಗ ಪ್ರವೇಶ. ಆ ವೇಳೆಗೆ ಮಹಾಲಿಂಗಂ ಶಾಲಾ ಇನ್ಸ್‍ಪೆಕ್ಟರಾಗಿ ಬಂದರು. ಮಹಾಲಿಂಗಂ, ಕಥಕ್ಕಳಿ ನೃತ್ಯ ಪರಿಣತರು. ಕೃಷ್ಣರಾಯರು ಅವರಲ್ಲಿ ಕಥಕ್ಕಳಿ ನೃತ್ಯಾಭ್ಯಾಸ ಮಾಡ ತೊಡಗಿದರು.

	ಕೃಷ್ಣರಾಯರು ಬೋಧನ ಕ್ರಮದಲ್ಲಿ ಸುಧಾರಣೆ ಮಾಡ ಬಯಸಿದರು. ಅದಕ್ಕೆ ಮಹಾಲಿಂಗಂ ಅವರ ಉತ್ತೇಜನವೂ ಇತ್ತು. ಶುಷ್ಕಪಾಠಪ್ರವಚನವಲ್ಲ. ಹಾಡು, ಅಭಿನಯ, ನೃತ್ಯಗಳಿಂದ ಕೂಡಿದ ಪಾಠ. ಮಕ್ಕಳು ಮೆಚ್ಚಿದರು. ಪೋಷಕರಿಗೂ ಇಷ್ಟವಾಯಿತು. ಶಾಲೆಯ ಆಡಳಿತ ಕೂಡ ಮಕ್ಕಳಿಂದಲೇ, ಪ್ರಜಾಸತ್ತಾತ್ಮಕ ವಿಧಾನದಲ್ಲಿ ಆಯ್ದ ಪ್ರತಿನಿಧಿಗಳ ಮೂಲಕ ಆಡಳಿತ. ಉತ್ತಮ ಶಿಕ್ಷಕರೆಂದು ಕೃಷ್ಣರಾಯರು ಗುರುತಿಸಲ್ಪಟ್ಟರು. ಶಾಲೆ ಬಿಟ್ಟ ನಂತರ ಸೈಕಲ್ ಹತ್ತಿ ಮನೆ ಮನೆಗೆ ಭೇಟಿ ನೀಡಿ ನೃತ್ಯ ಕಲಿಸಿದರು. ಕೃಷ್ಣರಾಯರ ಶಿಷ್ಯವೃಂದ, ಸಾರ್ವಜನಿಕ ಪ್ರದರ್ಶನ ನೀಡುವಷ್ಟು ಎತ್ತರಕ್ಕೆ ಬೆಳೆಯಿತು. ಮಂಗಳೂರಿನಲ್ಲಿ ನಡೆವ ಸಮಾರಂಭಗಳಲ್ಲಿ ಕಾರ್ಯಕ್ರಮ ಕಳೆಗಟ್ಟಲು, ಆಕರ್ಷಣೆ ಹೆಚ್ಚಿಸಿಲು ನೃತ್ಯ ಕಾರ್ಯಕ್ರಮ ಅಗತ್ಯವೆನ್ನುವ ಪರಿಸ್ಥಿತಿ ಉಂಟಾಯಿತು. 1941ರಲ್ಲಿ ಕೃಷ್ಣರಾಯರು ಮನೆಯಲ್ಲೇ ನೃತ್ಯಶಾಲೆ ಆರಂಭಿಸಿದರು. ನೃತ್ಯ ವಿದ್ಯಾನಿಲಯ ಜನಪ್ರಿಯವಾಯಿತು. ನವರಾತ್ರಿ ಸಮಯದಲ್ಲಿ ಇಲ್ಲಿ ನಡೆವ ನೃತ್ಯೋತ್ಸವ, ಜನರು ಆಸಕ್ತಿಯಿಂದ ನಿರೀಕ್ಷಿಸುತ್ತಿದ್ದ. ಸಾಂಸ್ಕøತಿಕ ಉತ್ಸವವಾಯಿತು. 

	ಕೇರಳದ ನೃತ್ಯ ಪರಿಣತ ರಾಜನಮ್ಯರ್ ಮಂಗಳೂರಿಗೆ ಬಂದರು. ಅವರು ಭರತನಾಟ್ಯ, ಕಥಕ್ಕಳಿ ನೃತ್ಯ ಪಟು. ಕೃಷ್ಣರಾಯರು ಅವರ ಬಳಿಯೂ ತಮ್ಮ ನೃತ್ಯಾಭ್ಯಾಸವನ್ನು ಮುಂದುವರಿಸಿದರು; ಕರಾವಳಿ ಮಂಗಳೂರಿನ ಸಾಂಸ್ಕøತಿಕ ಜೀವನದ ಅಂಗವಾದರು. ಅವರ ಸಂಸ್ಥೆಯ ನೃತ್ಯ ಪ್ರದರ್ಶನಗಳು ದೇಶಾದ್ಯಂತ ನಡೆದಿವೆ. ರಾಷ್ಟ್ರಪತಿ ಭವನದಲ್ಲಿ, ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣ ಅವರ ಸಮ್ಮುಖದಲ್ಲಿ ಪ್ರದರ್ಶನ ನೀಡಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೃತ್ಯವಿದ್ಯಾನಿಲಯದ ಬೆಳ್ಳಿ ಹಬ್ಬ ಮುಂಬಯಿ ನಗರದಲ್ಲಿ, ಸುವರ್ಣ ಮಹೋತ್ಸವ ಮಂಗಳೂರಿನಲ್ಲಿ ನಡೆಯಿತು. ಈ ಸಮಾರಂಭಗಳಲ್ಲಿ ಕೃಷ್ಣರಾಯರು ನಾಡಿನ ಹಿರಿಯ ಕಲಾ ಚೇತನಗಳನ್ನು ಗೌರವಿಸಿದರು. 

	ಕೃಷ್ಣರಾಯರ ಶಿಷ್ಯರ ಸಂಖ್ಯೆ ಅಪಾರ. ಸಾವಿರಕ್ಕೂ ಮೀರಿದೆ ಎಂದು ಒಂದು ಅಂದಾಜು. ಅವರಲ್ಲಿ ಅನೇಕರು ನೃತ್ಯ ಗುರುಗಳಾಗಿ, ದೇಶ, ವಿದೇಶಗಳಲ್ಲಿ ನೃತ್ಯ ಕಲೆಯ ಪ್ರಸಾರ ಮಾಡುತ್ತಿದ್ದಾರೆ. ರಾಯರ ಐದು ಮಂದಿ ಮಕ್ಕಳೂ ನೃತ್ಯರಂಗದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ 'ನೃತ್ಯನಿಕೇತನ್ ಮತ್ತು 'ಅರುಣ್ ಕಲಾವಿದರು ಸಂಸ್ಥೆಯ ಯು.ಕೆ.ಅರುಣ್, ಕೃಷ್ಣರಾಯರ ಪುತ್ರರು. ಯು.ಕೆ.ಪ್ರವೀಣ್ ಕದ್ರಿಯ ನೃತ್ಯ ವಿದ್ಯಾನಿಲಯದಲ್ಲಿ, ತಂದೆಯವರ ಪರವಾಗಿ ನೃತ್ಯಶಿಕ್ಷಣ ಕಾರ್ಯ ಮುಂದುವರೆಸಿದ್ದಾರೆ.	

	ನೃತ್ಯ ಕಲೆಗೆ ತಮ್ಮ ಜೀವನವನ್ನು ಅರ್ಪಿಸಿಕೊಂಡ ಕೃಷ್ಣರಾಯರು, ಕರ್ನಾಟಕ ನೃತ್ಯ ಅಕಾಡೆಮಿ ಪ್ರಶಸ್ತಿ (1981), ರಾಜ್ಯೋತ್ಸವ ಪ್ರಶಸ್ತಿ (1990), ನಾಟ್ಯರಾಣಿ ಶಾಂತಲಾ ಪ್ರಶಸ್ತಿಗಳಿಗೆ (1997) ಪಾತ್ರರಾಗಿದ್ದಾರೆ. 		(ಎಂ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ